Sheshadevaru
Suladhi

ಶ್ರೀ ಶೇಷದೇವರ ಸುಳಾದಿ

ಶ್ರೀ ಅಭಿನವಪ್ರಾಣೇಶವಿಠಲ ದಾಸಾ ವಿರಚಿತ

ರಾಗ ಕಲ್ಯಾಣಿ

ಧ್ರುವತಾಳ

ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ
ವಾರಿಣಿ ಕಳತ್ರ ಚಟುಲಗಾತ್ರ
ವಾರಿಜನಾಭನ ಹಾಸುಗೆಯಾಗಿಯ –
ಪಾರ ಸೇವೆಗರೆವ ಶೇಷದೇವ
ಧಾರುಣಿ ಪೊತ್ತು ಸರ್ವ ಜೀವರ ಸಲಹುವ
ವೀರ ಕಾಕೋದರ ನೀಲಾಂಬರ
ಈರೊಂದು ಸಹಸ್ರ ಜಿಹ್ವೆಗಳಿಂದ ನಿತ್ಯ
ಮಾರಮಣನ ಗುಣ ಮಹಿಮೆ ಕೊಂಡಾಡುವ
ವೀರ ವೈಷ್ಣವ ದೇವ ಚಕ್ಷುಸ್ರವ
ಕಾರೊಡಲಭಿನವ ಪ್ರಾಣೇಶವಿಠಲನ
ಚಾರು ಚರಣಾಬ್ಜಾಳಿ ಸರ್ಪಕುಲಮೌಳಿ ॥ 1 ॥

ಮಟ್ಟತಾಳ

ನಾರಾಯಣನೊಡನೆ ಮೂರುತಿಯಲಿ ಸುಬ್ದ
ಚಾರು ಬದರಿಯಲಿ ನೆಲಸಿದ ಅಹಿರಾಜ
ಈರೊಂದು ಯುಗದಿ ಲಕ್ಷ್ಮಣ ನಾಮಕನು
ಈರೈದು ರಥನ ಸುಮಿತ್ರೆಯ ಸುತನು
ಮೂರನೆ ಯುಗದಲ್ಲಿ ಬಲರಾಮಾಭಿದನು
ತಾರಾ ವಾಸುದೇವ ತನುಭವನೆನಿಸಿದನು
ಕ್ಷೀರಜಾತೆ ಪತಿಯ ರುಕ್ಮಿಣೀಶ ಹರಿಯ
ಭೂರಿ ಭಕುತಿಯಿಂದ ಸೇವಿಸಿ ಪೂಜಿಸುತ
ಪಾರ ಪುಣ್ಯ ರಾಶಿ ಗಳಿಸಿದ ಮಹಾರಾಯ
ಶ್ರೀರಮಣಭಿನವ ಪ್ರಾಣೇಶವಿಠಲನ
ಚಾರು ಮಹಿಮಾಮೃತವ ಕರೆದುಣಿಸಿ ದೇವಾ ॥ 2 ॥

ತ್ರಿವಿಡಿತಾಳ

ದ್ವಿತಿಯುಗದಲಿ ಸೀತಾಪತಿಯ ಅನುಜನಾಗಿ
ಕ್ಷಿತಿಜಾಧವನ ಕೂಡ ವನಕೆ ಪೋಗಿ
ಪತಿತ ಶಂಭೂಕ ಮೇಘನಾದ ಮುಖ್ಯರ ಕುಟ್ಟಿ
ಕ್ಷಿತಿಭಾರ ಇಳಿಸುವ ಕಾರ್ಯ ಮಾಡಿ
ಕ್ಷಿತಿಪತಿ ರಾಮನ ನೆರಳಂತೆಯನುಸರಿಸಿ
ಸತತ ಸೇವೆಯಗರೆದ ಸೌಮಿತ್ರಿಯೇ
ಕ್ಷಿತಿಧರ ಅಭಿನವ ಪ್ರಾಣೇಶವಿಠಲನ
ಅತುಳ ನಾಮಾಮೃತವ ಗರೆದುಣಿಸು ದೇವಾ ॥ 3 ॥

ಅಟ್ಟತಾಳ

ದ್ವಾಪರ ಯುಗದಲಿ ರುಕ್ಮಿಣೀಶಾಗ್ರಜ
ಪಾಪಿ ಪ್ರಲಂಬ ಮುಷ್ಠಕ ಮುಖ್ಯ ದೈತ್ಯರ
ಕಾಪುರುಷರ ಕುಟ್ಟಿ ಯಮಪುರಕಟ್ಟಿದೆ
ಶ್ರೀಪತಿ ಕಲುಷನ ರಾಜ್ಯ ತಂತ್ರದಿಂದ
ಕಾಪತಿ ಕುರುಪತಿ ನಿಲಯನ ಪೊಂದಲು
ಸ್ಥಾಪಿಸಿ ಕರಿಪುರದೊಳು ಧರ್ಮರಾಜ್ಯವ
ಭೂಪ ಧರ್ಮಜಗೆ ಪಟ್ಟವಗಟ್ಟಲು
ಅಪಾರಾನಂದ ಸುಜನರಿಗಾಯಿತು
ಶ್ರೀಪತಿ ಅಭಿನವ ಪ್ರಾಣೇಶವಿಠಲನ
ರೂಪ ರಾಜ್ಯವ ನೋಡಿ ಪಾಡಿ ಹಿಗ್ಗುವ ದೇವ ॥ 4 ॥

ಆದಿತಾಳ

ಹರಿ ಪರ್ಯಂಕನೆ ಹರಲಂಕಾರನೇ
ಹರಿ ಹಯ ಸನ್ನುತ ಸುರಗಣ ಸೇವಿತ
ಖರ ಯುಗದಲಿ ಯಾ ದೇಶವತಾರದಿ
ಧರೆಯೊಳು ಜನಿಸಿದೆ ಮುಷ್ಕರ ಎನಿಸಿದೆ
ಗುರು ಮಧ್ವಾರ್ಯರ ಸರ್ವ ಮೂಲಗಳ
ಸರಳಾನುವಾದವ ವಿರಚಿಸಿ ಸುಜನಕೆ
ಹರುಷವ ಬೀರಿದೆ ಕರುಣವ ತೋರಿದೆ
ಶರಧರ ಅಭಿನವ ಪ್ರಾಣೇಶವಿಠಲನ
ಚರಣ ಧ್ಯಾನದಿ ಮಾನ್ಯಖೇಡದಿಹ ಗುರುವೇ ॥ 5 ॥

ಜತೆ

ಮಾನ್ಯಾಭಿನವ ಪ್ರಾಣೇಶವಿಠಲನ
ಘನ ಭಜನೆಯ ನೀಡು ಪನ್ನಂಗ ದೇವ ॥

https://drive.google.com/file/d/1ud5Al7xCGuvH65fRuPVCS-6js2YigKVI/view?usp=drivesdk

Leave a Reply

Your email address will not be published. Required fields are marked *