ಕಂಚಿ ವರದರಾಜ ಸುಳಾದಿ
ಶ್ರೀ ವಿಜಯದಾಸಾ ವಿರಚಿತ
ರಾಗ ಆನಂದಭೈರವಿ
ಧ್ರುವತಾಳ
ತಮನನ್ನ ಕೊಂದು ಆಗಮವ ಬಿಡಿಸಿ ತಂದು
ಸುಮನಸರಿಗೆ ಸುಧೆ ಕ್ರಮದಿಂದಲೆರದೇ
ಕುಮತಿ ಹೇಮಾಕ್ಷನ ಗಮಕವ ಮುರಿದೆ
ಸಮತಿಯ ಮೊರೆ ಕೇಳಿ ಅಮರಾರಿಯ ಸೀಳಿ
ಅಮಮ ಯೋಮಕೆ ಬೆಳೆದು ನಮಿತನ್ನ ತುಳಿದು
ಜಮದಗ್ನಿ ನಿಜಜಾತಾ ಸಮರದೊಳು ನಿರ್ಭೀತಾ
ಉಮೆ ಅರಸನ್ನ ಪ್ರೀತಾ ಕಮಲಾಪ್ತ ಕುಲಜಾತಾ
ಯಾಮಾದಿಯಾ ಗೆದ್ದು ಸುರದ್ರುಮವ ತಂದ ಗಂಭೀರ
ರಮಣೀರ ವ್ರತವಾಕ್ರಮಿಸಿದ ಬಲುದೇವಾ
ವಿಮಲಾ ತುಂಗಾ ತುರಂಗಾ ಗಮನ ದುರಿತ ಭಂಗಾ
ಅಮಿತಮಹಿಮ ಕಂಚಿವರದ ವಿಜಯವಿಠ್ಠಲ
ಸಮರಾರು ನಿನಗನುಪಮ ಚಿತ್ರ ಚರಿತ್ರಾ ॥ 1 ॥
ಮಟ್ಟತಾಳ
ಪುಣ್ಯ ಶ್ಲೋಕರಾಯಾ ಪುಣ್ಯ ಪೂರ್ತಿರಾಯಾ
ಪುಣ್ಯವಂತರಾಯಾ ಪುಣ್ಯಕೀರ್ತನೆರಾಯಾ
ಪುಣ್ಯಮಹಿಮರಾಯಾ ಪುಣ್ಯಸಾಧನರಾಯಾ
ಪುಣ್ಯಪೂರುತಿರಾಯಾ ಪುಣ್ಯಕೋಟಿರಾಯಾ
ಪುಣ್ಯರಿಗೆ ಸತ್ಪುಣ್ಯಕೊಡುವರಾಯಾ
ಪುಣ್ಯತೀರ್ಥರಾಯ ವಿಜಯವಿಠ್ಠಲರಾಯಾ
ಪುಣ್ಯಕ್ಷೇತ್ರ ಕಂಚಿ ಪುಣ್ಯವರದರಾಯಾ ॥ 2 ॥
ತ್ರಿವಿಡಿತಾಳ
ಅಜನು ಸಭಾಸ್ಥಾನಾ ನೆರೆಸಲು ವಾಲಗಕೆ
ಭುಜಗಭರಣ ಇಂದ್ರ ಸುರಮುನಿ ವ್ರಜವೆಲ್ಲ
ನಿಜವಾಗಿ ಬಂದು ವಾರಿಜ ಕರವನೆ ಮುಗಿದು
ಅಜನ ಪೊಗಳಲಾ ನೀನೋಡಿ ಹರುಷದಿಂದ
ತ್ರಿಜಗದೊಳಗೆ ಉತ್ತುಮ ಸಾಧನಕೆ
ಸುಜನರೊಂದಾಗಿ ಬೆಸಸೆನಲು ವಶಿಷ್ಠ ಮುನಿ
ಅಜಗರುಹಿದನು ಭೂತಳದೊಳಿಗಿದನು
ವಿಜಯವಿಗ್ರಹ ಕಂಚಿವರದ ವಿಜಯವಿಠ್ಠಲ
ಭಜಿಸಲು ವೊಲಿವನು ಭಕ್ತರಿಗಾವಾಗಾ ॥ 3 ॥
ಅಟ್ಟತಾಳ
ಮುನಿ ನುಡಿದ ಮಾತನು ಮನ್ನಿಸಿ ಬಂದು
ವನಜಸಂಭವನು ಸಜ್ಜನರಿಗೆ ಮನೋರಥ –
ವನು ಮಾಡುವೆನೆಂದು ನೆನೆದು ಯಾಗವ ಮಾಡೆ
ದನುಜಾರಿ ಮೆಚ್ಚಿ ಬಂದನು ಝಗಝಗಿಪ ರ –
ತುನಮಯ ಪುಣ್ಯಕೋಟಿಯನು ಏರಿಕೊಂಡು
ಝಣ ಝಣ ಝಣ ಡಂ ಢಣವೆಂಬೊ ಘಂಟೆ
ಘಣಲೆಂದು ಕೂಗಲು ಅನಲಾ ಮಧ್ಯದಿಂದ
ತನಗೆ ತಾನೆ ಪೊಳೆದಾ ಅನಿಮಿಷರಾಡಲು
ಘನ ಕಂಚಿವರದ ಶ್ರೀವಿಜಯವಿಠ್ಠಲರೇಯಾ
ಮನಕೆ ಬಂದರೆ ಸಾಧನವಾ ಪೂರೈಸುವಾ ॥ 4 ॥
ಆದಿತಾಳ
ಅಂದು ಮೊದಲಾಗಿ ಇಲ್ಲಿ ಚಂದದಿಂದ ಉದುಭವಿಸಿ
ಬಂದ ಬಂದವರಿಗೆಲ್ಲಾ ನಂದದಿಂದ ವರನೀವುತ್ತಾ
ಕುಂದಾಗೊಡದೆ ಭಕ್ತರನ್ನ ಸಂದೇಹವಿಲ್ಲದೆ ಪೊರದು
ಪೊಂದಲಿಟ್ಟು ಕೊಂಡು ಪಾದದ್ವಂದ್ವದಾ ಸೇವೆಯ ನೀವಾ
ಕಂದರ್ಪನಯ್ಯಾ ಕಂಚಿವರದಾ ವಿಜಯವಿಠ್ಠಲಾ
ಎಂದೆಂದು ಗುಣಪೂರ್ಣಸಾಂದ್ರ ಸುಖದ ದಯಾಳು ॥ 5 ॥
ಜತೆ
ಕಂಚಿಯ ನಿಲಯಾ ನೀಲವರ್ನ ಶ್ರೀವತ್ಸ –
ಲಾಂಛನ ವರದಾ ಶ್ರೀವಿಜಯವಿಠ್ಠಲ ಮೆರದಾ ॥
https://drive.google.com/file/d/1inLPYlOBuGt0XJCePkesvUf0ruQhqAtS/view?usp=drivesdk