Suladhi

ಶ್ರೀ ಮೂಲ ರಾಮದೇವರ ಮಹಿಮೆಯ ಸುಳಾದಿ

ಶ್ರೀ ಪ್ರಸನ್ನವೆಂಕಟದಾಸಾ ವಿರಚಿತ

ರಾಗ : ಆನಂದಭೈರವಿ

ಧ್ರುವತಾಳ

ರಾಮ ರಘುಕುಲ ಸಾರ್ವಭೌಮ ಪೂರಣಕಾಮ
ಜೀಮೂತಶಾಮ ಶ್ರೀ ಮೂಲರಾಮ
ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ
ಪ್ರೇಮಸಾಗರ ಭಕ್ತಜನ ಮನೋಹರ
ಸಾಮಜಾರ್ತಿಹರ ಸಾಮಗಾನದರ ನಿ-
ಸ್ಸೀಮ ಗುಣಗಂಭಿರ ಏಕವೀರ
ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ
ನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ॥ 1 ॥

ಮಟ್ಟತಾಳ

ಪಿಂತೆ ಸಮೀರಜನ ಸೇವೆಗೆ ಮೆಚ್ಚ-
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿ ರಾಮ
ಕಂತುಜನಕ ನಿತ್ಯಾನಂದನೆ ನಿ-
ನನ್ನಂತವರಿಯೆ ನಿಗಮಾಗಮಕಳವೆ॥ 2 ॥

ತ್ರಿವಿಡಿತಾಳ

ನಿರುತ ವೈಕುಂಠ ಮಂದಿರವಿದ್ದು
ಪರಣ ಕುಟೀರವನಾಶ್ರಯಿಸುವ ಘನತೆಯೆತ್ತ
ವರಪೀತಾಂಬರ ದಾಮವನು ಬಿಟ್ಟು ವಲ್ಕಲ
ಧರಿಸಿ ಕಾನನದಿ ಸಂಚರಿ ಪೋದೆತ್ತ
ನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗ-
ದೊರೆಯೆ ಪ್ರಸನ್ನವೆಂಕಟಾದ್ರಿ ರಘುರಾಮ ॥ 3 ॥

ಅಟ್ಟತಾಳ

ಹರವರದಲಿ ಬಲು ಮತ್ತಾದ ರಜನೀ
ಚರವರ ಲಂಕೆಯಲಿ ಬಲಿದು ಗರ್ವದಿ
ಸುರವರರನುರೆ ಬಾಧಿಸಲವರನು
ಪೊರೆವರು ದಾರಯ್ಯ ನಿನ್ನಿಂದ
ಸ್ಥಿರವರದಾಯಕ ಪ್ರಸನ್ವೆಂಕಟ
ಗಿರಿವರನೀಲಯ ಕೌಸಲ್ಯೆಯ ಕಂದ ॥ 4 ॥

ಆದಿತಾಳ

ಅಕಳಂಕ ಅಕುತೋತಂಕ ಅಕಳಂಕ
ಮಕುಟ ಕುಂಡಲ ಕೌಸ್ತುಭ ಕೇಯೂರ ವಲ
ಯಾಂಕಿತ ಕೋದಂಡ ಕಾರ್ಮುಕಪಾಣಿ
ಅಕಳಂಕ ಸುಖತೀರ್ಥವಂದಿತ ಪಾ-
ದಕಮಲ ವಿಧಿನುತ ಮುಖಪಾಲಕ ಪ್ರಸನ್ನ
ವೆಂಕಟಾಧಿಪ ಅಕಳಂಕ ॥ 5 ॥

ಜತೆ

ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿ
ಬಂದು ನೀನಿಂತೆ ನಿಜರಮಣಿಯೊಡನೆ
ಎಂದೆಂದು ಸತ್ಯಾಭಿನವ ತೀರ್ಥ ಗುರು ಹೃದಯ
ಮಂದಿರನೆ ಪ್ರಸನ್ನವೆಂಕಟ ವರದ ರಾಮ ॥

https://drive.google.com/file/d/13tXuluVm5yEtkiZa0E87HNb65q5JpsJn/view?usp=drivesdk

Leave a Reply

Your email address will not be published. Required fields are marked *